Uttar pradesh: 29 ಸ್ಪೂನು,19 ಬ್ರಷ್ ನುಂಗಿದ್ದ ಮಹಾಭೂಪ..!ವಿಚಿತ್ರ ಘಟನೆ
ಇದು ಕಟ್ಟು ಕಥೆ ಅಲ್ಲ. ಈ ಸತ್ಯ ಘಟನೆ ಕೇಳಿ ನೀವು ಹೌಹಾರಬಹುದು. ಇಂತ ಭೂಪನ ಅಸಲಿ ಕಥೆ ಕೇಳಿದ್ರೆ, ಇದೇನು ಪವಾಡವೋ, ಮಾಂತ್ರಿಕ ಶಕ್ತಿಯೋ ಅಂತಾ ಆಶ್ಚರ್ಯಚಕಿತರಾಗ್ತೀರಿ. ಆದ್ರೆ, ಇಂತಹ ವ್ಯಕ್ತಿಯನ್ನು ಕಣ್ಣೇದುರೆ ಚಿಕಿತ್ಸೆ ಮಾಡಿ ಪ್ರಾಣಾಪಾಯದಿಂದ ಪಾರು ಮಾಡಿದ ಡಾಕ್ಟರ್ಗೆ ಹೇಗಾಗಿರಬೇಡ. ಈ ಘಟನೆ ನಡೆದಿದ್ದು ಉತ್ತರ ಪ್ರದೇಶದಲ್ಲಿ. ಹೊಟ್ಟೆ ನೋವು ಅಂತಾ ಆಸ್ಪತ್ರೆಗೆ ಬಂದಾಗ ಡಾಕ್ಟರ್ ನಾರ್ಮಲ್ ಆಗೇ ಇದ್ದರು. ಆದ್ರೆ, ಹೊಟ್ಟೆಯ ಕಂಡೀಷನ್ ನೋಡಿ ಅಲ್ಟ್ರಾಸೌಂಡ್ ಟೆಸ್ಟ್ ಮಾಡಿದ್ಮೇಲೆ ಡಾಕ್ಟರ್ ಅರೆಕ್ಷಣ ದಂಗಾಗಿ ಹೋಗಿದ್ರು.
ಸ್ಕ್ಯಾನಿಂಗ್ ಶಸ್ತ್ರ ಚಿಕಿತ್ಸೆ.! ಬೆಚ್ಚಿ ಬಿದ್ದ ಡಾಕ್ಟರ್
ಉತ್ತರ ಪ್ರದೇಶದ ಹಾರ್ಪುರದಲ್ಲಿರುವ ಖಾಸಗಿ ಆಸ್ಪತ್ರೆಗೆ ಇತ್ತೀಚೆಗೆ ಹೊಟ್ಟೆ ನೋವು ಅಂತ ಬಂದಿದ್ದ ವ್ಯಕ್ತಿಯೊಬ್ಬ ಹೊಟ್ಟೆ ತುಂಬಾ ಚಮಚಗಳನ್ನೇ ನುಂಗಿ ವೈದ್ಯಕೀಯ ಲೋಕವೇ ಬೆಚ್ಚಿ ಬೀಳುವಂತೆ ಮಾಡಿದ್ದಾನೆ. ಆತನ ಹೊಟ್ಟೆಯಲ್ಲಿ ಗಟ್ಟಿಯಾದ ವಸ್ತುವೋ, ಅಥವಾ ಪದಾರ್ಥವೋ ಇದೆ ಎಂದಾಕ್ಷಣ ಆಪರೇಷನ್ಗೆ ಸಜ್ಜಾದ ಡಾಕ್ಟರ್ಗಳು ಹೊಟ್ಟೆಯಿಂದ 29 ಸ್ಟೀಲ್ ಚಮಚಗಳು, 19 ಟೂತ್ ಬ್ರಷ್ ಗಳನ್ನು ಹಾಗೂ ಎರಡು ಚೂಪು ನಿಬ್ ಗಳಿರುವ ಪೆನ್ ಗಳನ್ನು ಹೊರತಗೆದಿದ್ದಾರೆ.
ಎಣ್ಣೆ ಕುಡಿಯೋದು ಬಿಡಲ್ಲ.! ಸಿಟ್ಟಿಗೆದ್ದು ಮಾಡಿದ್ದೇನು.!?
ಈ ವ್ಯಕ್ತಿ ಮೂಲತಃ ಉತ್ತರ ಪ್ರದೇಶದ ಬುಲಂದ್ ಶಹರ್ ನ ನಿವಾಸಿ. ಈತ ಮದ್ವೆ ಕೂಡ ಆಗಿದ್ದು, ಇಬ್ಬರು ಮಕ್ಕಳೂ ಸಹ ಇದ್ದಾರೆ. ಮೊದಲಿನಿಂದಲೂ ಮದ್ಯವ್ಯಸನಿಯಾಗಿದ್ದ ಈತನ ಕುಡಿತ ಬಿಡಿಸಲು ಪಡಬಾರದ ಪಾಡನ್ನು ಕುಟುಂಬದವ್ರು ಪಟ್ಟಿದ್ರು. ಹತ್ತಿರದ ಡಿ-ಅಡಿಕ್ಷನ್ ಕೇಂದ್ರಕ್ಕೆ ಸೇರಿಸಿ ಎಣ್ಣೆ ಚಟ ಬಿಡಿಸೋ ಪ್ಲಾನ್ ಮಾಡಿದ್ರು.
ಗಾಜಿಯಾಬಾದ್ ನಲ್ಲಿದ್ದ ಡಿ-ಅಡಿಕ್ಷನ್ ಕೇಂದ್ರದಲ್ಲಿ ಆತ ತನ್ನವರು ಯಾರೂ ಹತ್ತಿರದಲ್ಲಿ ಇಲ್ಲದ್ದಕ್ಕೆ ಹಾಗೂ ಮದ್ಯಪಾನ ಸಿಗದೇ ಇದೋದಕ್ಕೆ ಮಾನಸಿಕವಾಗಿ ಖಿನ್ನತೆಯಿಂದ ಬಳಲುತ್ತಿದ್ದನಂತೆ. ಆರಂಭದಲ್ಲಿ ಈತ ಆಲ್ಕೋಹಾಲ್ ಕೊಡದಿದ್ದರೆ ಊಟವನ್ನೂ ಮಾಡೋದಿಲ್ಲ ಎಂದು ಗಲಾಟೆ ಮಾಡಿದ್ದರಿಂದ ಆತನಿಗೆ ಊಟವನ್ನು ನಿಲ್ಲಿಸಲಾಗಿತ್ತಂತೆ. ಇದರಿಂದ ಮತ್ತಷ್ಟು ಖಿನ್ನತೆಗೆ ಒಳಗಾಗಿದ್ದ ಈತ ಮಾನಸಿಕವಾಗಿ ಮತ್ತಷ್ಟು ಕುಗ್ಗಿ ಹೋಗಿದ್ದಾನೆ.
ಎಣ್ಣೆ ಮೇಲಿನ ಸಿಟ್ಟು ಹೊಟ್ಟೆ ಮೇಲೆ..!
ಮನೆಯವರ ಮೇಲೆ ಆಕ್ರೋಶ, ಡಿ-ಅಡಿಕ್ಷನ್ ಕೇಂದ್ರದವರ ಮೇಲೆ ಸಿಟ್ಟು ಬಂದು ರೋಷದಿಂದ ಕುಗ್ಗಿ ಹೋಗಿದ್ದ. ಅಂಥ ಸಂದರ್ಭದಲ್ಲಿ ಆತನಿಗೆ ವಿಪರೀತ ಹೊಟ್ಟೆ ಹಸಿವೂ ಬೇರೆ ಆಗುತ್ತಿತ್ತು. ಆದರೆ, ಊಟದ ಮೇಲೆ ಹಾಗೂ ಡಿ- ಅಡಿಕ್ಷನ್ ಸಿಬ್ಬಂದಿ ಮೇಲಿನ ಮುನಿಸಿಗೆ ರೋಷಾವೇಷ ತೋರ್ತಿದ್ದ. ಕೊನೆಗೆ ಊಟ ಕೇಳದೇ ತನ್ನ ಒಣ ಧಿಮಾಕಿನಿಂದ ದರ್ಪ ತೋರಿದ ಈತ ಹಸಿವಿನಿಂದ ಡಿ-ಅಡಿಕ್ಷನ್ ಕೇಂದ್ರದಲ್ಲಿ ತನ್ನ ಕೈಗೆ ಸಿಕ್ಕಿದ್ದ ಸ್ಪೂನ್ ಗಳು, ಟೂತ್ ಬ್ರಷ್ ಗಳು ಹಾಗೂ ಪೆನ್ನುಗಳನ್ನು ನುಂಗಿದ್ದಾಗಿ ಆತನೇ ವೈದ್ಯರ ಮುಂದೆ ಹೇಳಿಕೊಂಡಿದ್ದಾನೆ.
ಅದೃಷ್ಠವಶಾತ್ ವೈದ್ಯರ ಸಮಯೋಚಿತ ಚಿಕಿತ್ಸೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಎಣ್ಣೆ ಮೇಲಿನ ಸಿಟ್ಟನ್ನು ಹೊಟ್ಟೆ ಮೇಲೆ ತೋರಿಸಿದ್ರೆ ಚಟ್ಟ ಏರಬೇಕಾಗಬಹುದು ಅನ್ನೋದನ್ನು ಅರಿತರೆ ಇಂತಹ ಚಿತ್ರವಿಚಿತ್ರ ಘಟನೆಗಳು ನಡೆಯೋದಿಲ್ಲ.
—