husband wife quarrel: ಗಂಡ-ಹೆಂಡತಿ ಜಗಳದಲ್ಲಿ ಪಿಎಸ್‌ಐ ಪ್ರಶ್ನೆ ಪತ್ರಿಕೆ ಸೋರಿಕೆ ಸತ್ಯ ಬಯಲು
ಗಂಡ – ಹೆಂಡತಿ ಜಗಳದಲ್ಲಿ ಪಿಎಸ್‌ಐ ಪ್ರಶ್ನೆಪತ್ರಿಕೆ ಸೋರಿಕೆಯ ಸತ್ಯ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ಪಿಎಸ್‌ಐ. ಆಗಿ ಸೇವೆ ಸಲ್ಲಿಸಿದ್ದ ನಿತ್ಯಾನಂದಗೌಡ ಎಂಬುವರು ಪ್ರಶ್ನೆಪತ್ರಿಕೆಯನ್ನು ಪಡೆದುಕೊಂಡು ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ ಎಂಬ ಗಂಭೀರ ಆರೋಪ ಇದೀಗ ಕೇಳಿ ಬಂದಿದೆ.
ಇತ್ತೀಚೆಗೆ ಪಿಎಸ್ಐ ನಿತ್ಯಾನಂದಗೌಡನ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಇಬ್ಬರ ಮಧ್ಯೆ ಜಗಳ ಆಗಿದೆ. ಜಗಳದ ನಂತರ ಅವರ ಪತ್ನಿ ಸಾರ್ವಜನಿಕವಾಗಿ ‘ಪಿಎಸ್ಐ ಪರೀಕ್ಷೆಯ ಅಕ್ರಮಗಳ’ ಬಗ್ಗೆ ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ.
ಈ ಆರೋಪಕ್ಕೆ ಪುಷ್ಟಿ ನೀಡುವಂತೆ, ನಿತ್ಯಾನಂದಗೌಡ ಮತ್ತು ಪ್ರಶ್ನೆಪತ್ರಿಕೆ ಮುದ್ರಿಸಿದ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ನಡುವಿನ ಆಡಿಯೋ ವೈರಲ್ ಆಗಿದೆ. ಈ ಆಡಿಯೋದಲ್ಲಿ, ಮಹಿಳೆ ಭೀತಿಯಿಂದ ಪ್ರಶ್ನೆ ಪತ್ರಿಕೆ ವಿಚಾರವಾಗಿ ಪೊಲೀಸ್ ತನಿಖೆ ಮಾಡಿ ಸ್ಪಾಟ್ ಮಹಜರ್ ಆದರೆ ಮರ್ಯಾದೆ ಹೋಗುತ್ತದೆ ನಿಮ್ಮ ಕಾಲಿಗೆ ಬೀಳುತ್ತೇನೆ ಎಂದು ಗೋಗರೆದಿದ್ದಾರೆ. ಇದಕ್ಕೆ ಪಿಎಸ್‌ಐ ನಿತ್ಯಾನಂದಗೌಡ, ಯಾವ ಬದನೆಕಾಯಿಯೂ ಆಗಲ್ಲ, ಸುಮ್ಮನಿರಿ ಎಂದು ಧೈರ್ಯ ತುಂಬಿದ್ದಾರೆ. ನಾನು ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡಿದ್ದು ನಿಜ, ನನಗೆ ಪ್ರಶ್ನೆಪತ್ರಿಕೆ ಸಿಕ್ಕಿಲ್ಲ, ನಾನು ನೋಡಿಲ್ಲ, ನಾನು ಯಾರಿಗೂ ಕೊಟ್ಟಿಲ್ಲ ಎಂದು ಹೇಳಿ. ಏನೂ ಆಗಲ್ಲ ಎಂದು ಸಮಾಧಾನ ಮಾಡಿದ್ದಾರೆ.
ಈ ಆಡಿಯೋ ವೈರಲ್ ಆಗುತ್ತಿದ್ದಂತೆಯೇ ಕಳಸ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರಫೀಕ್ ಚಿಕ್ಕಮಗಳೂರು ಎಸ್ಪಿ ಅವರಿಗೆ ದೂರು ನೀಡಿದ್ದಾರೆ. ಪ್ರಶ್ನೆಪತ್ರಿಕೆ ಪಡೆದು ಎಕ್ಸಾಂ ಪಾಸ್ ಆಗಿರೋದಾಗಿ ಅನುಮಾನ ಬಂದಿದೆ, ತನಿಖೆ ಮಾಡುವಂತೆ ದೂರು ನೀಡಿದ್ದಾರೆ. ಈ ಅಡಿಯೋ ಸಂಭಾಷಣೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಪೊಲೀಸ್ ಇಲಾಖೆಯ ತನಿಖೆ ಈ ಪ್ರಕರಣದ ಸತ್ಯವನ್ನು ಹೊರ ತರಬೇಕಿದೆ.