SL Bhyrappa: ಪಂಚಭೂತಗಳಲ್ಲಿ ಲೀನರಾದ ಎಸ್ಎಲ್ ಭೈರಪ್ಪ
ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರು ಶುಕ್ರವಾರ ಪಂಚಭೂತಗಳಲ್ಲಿ ಲೀನರಾದರು. ಸಕಲ ಸರ್ಕಾರಿ ಗೌರವದೊಂದಿಗೆ ಮೈಸೂರಿನ ಚಾಮುಂಡಿಬೆಟ್ಟ ತಪ್ಪಲಿನ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿದೆ.
ಪತ್ನಿ ಸರಸ್ವತಿ, ಕುಟುಂಬಸ್ಥರು, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹಾಗೂ ಉಸ್ತುವಾರಿ ಸಚಿವ ಮಹದೇವಪ್ಪ, ಮಾಜಿ ಸಂಸದ ಪ್ರತಾಪ್ ಸಿಂಹ, ಸಚಿವ ಕೆ.ವೆಂಕಟೇಶ್, ಅಭಿಮಾನಿಗಳು ಸೇರಿ ಸಾವಿರಾರು ಜನರು ಭಾಗಿಯಾಗಿದ್ದರು.
ಅಂತಿಮ ವಿಧಿ ವಿಧಾನವನ್ನು ತಮ್ಮ ಪುತ್ರರು ಮಾಡಬಾರದು ಎಂದು ಭೈರಪ್ಪ ಅವರು ಬರೆದಿಟ್ಟಿದ್ದರು. ಹೀಗಾಗಿ ಅಗಲಿದ ಅಂತಿಮ ವಿಧಿ ವಿಧಾನ ಯಾರು ನೆರವೇರಿಸುತ್ತಾರೆ ಎಂಬ ಪ್ರಶ್ನೆ ಇತ್ತು. ಪುತ್ರರಾದ ರವಿಶಂಕರ್, ಉದಯ್ ಶಂಕರ್ ಅಂತಿಮ ವಿಧಿ ವಿಧಾನ ನೆರವೇರಿಸಿದರು, ಭೈರಪ್ಪನವರ ಇಚ್ಛೆಯಂತೆ ಅಂತ್ಯ ಸಂಸ್ಕಾರದಲ್ಲಿ ಉದಯೋನ್ಮುಖ ಲೇಖಕಿ ಸಹನಾ ವಿಜಯ್‌ಕುಮಾರ್ ಸಹ ಉಪಸ್ಥಿತರಿದ್ದರು. ಅಂತಿಮ ವಿಧಿವಿಧಾನಗಳ ಬಳಿಕ ಪುತ್ರರ ಜೊತೆಗೆ ಸಹನಾ ವಿಜಯ್‌ಕುಮಾರ್ ಭೈರಪ್ಪ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಎಸ್ ಎಲ್ ಭೈರಪ್ಪ ಪಂಚಭೂತಗಳಲ್ಲಿ ಲೀನವಾದರು.
ಭೈರಪ್ಪ ಅವರ ಅಂತ್ಯ ಸಂಸ್ಕಾರಕವನ್ನು ಬ್ರಾಹ್ಮಣ ಸಂಪ್ರದಾಯದಂತೆ ಮಾಡಲಾಯಿತು. ಅದಕ್ಕೂ ಮುನ್ನ ಬಂದೂಕು ಪಡೆಯಿಂದ ಗೌರವ ವಂದನೆ ಸಲ್ಲಿಸಲಾಯಿತು. ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ ಬಳಿಕ ಗೌರವ ವಂದನೆ ನಡೆಯಿತು. ಸರ್ಕಾರಿ ಗೌರವದ ಬಳಿಕ ತ್ರಿವರ್ಣ ಧ್ವಜ ಹಸ್ತಾಂತರ ಮಾಡಲಾಯಿತು. ಭೈರಪ್ಪ ಮಕ್ಕಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್‌ಸಿ ಮಹದೇವಪ್ಪ ತ್ರಿವರ್ಣ ಧ್ವಜ ಹಸ್ತಾಂತರ ಮಾಡಿದರು.