Lovers commits suicide: ಪ್ರೀತಿಗೆ ಅಡ್ಡ ಬಂದ ಜಾತಿ: ದುರಂತ ಅಂತ್ಯ ಕಂಡ ಅಪ್ರಾಪ್ತ ಪ್ರೇಮಿಗಳು
ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದಕ್ಕೆ ಪ್ರೇಮಿಗಳು ರೈಲಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಬ್ಯಾಟರಾಯನಹಳ್ಳಿ ರೈಲ್ವೇ ನಿಲ್ದಾಣ ಬಳಿ ನಡೆದಿದೆ. ಇಂದು ಬೆಳಿಗ್ಗೆ ಬೆಂಗಳೂರಿಗೆ ತೆರಳುವ ರೈಲಿಗೆ ಸಿಲುಕಿ ಪ್ರೇಮಿಗಳು ಪ್ರಾಣ ಬಿಟ್ಟಿದ್ದಾರೆ.
ಮಾಲೂರು ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ 18 ವರ್ಷದ ಸತೀಶ್ ಎಂಬಾತ ಹಾಗೂ ಮಾಲೂರು ತಾಲೂಕಿನ ಪನಮಾಕನಹಳ್ಳಿ ಗ್ರಾಮದ 17 ವರ್ಷದ ಶ್ವೇತಾ ಎಂಬಾಕೆ ಮೃತಪಟ್ಟಿದ್ದಾರೆ. ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮುಂಬರುವ ದಿನಗಳಲ್ಲಿ ಮದುವೆಯಾಗಬೇಕು ಎಂದು ಅಂದುಕೊಂಡಿದ್ದರು. ಆದ್ರೆ ಅನ್ಯ ಜಾತಿ ಎಂದು ಈ ಇಬ್ಬರ ಪ್ರೀತಿಗೆ ಪೋಷಕರ ವಿರೋಧ ವ್ಯಕ್ತಪಡಿಸಿದ್ದಾರೆ.
ನಿನ್ನೆ ಸತೀಶ್ ತನ್ನ ಹುಟ್ಟುಹಬ್ಬವನ್ನು ಸ್ನೇಹಿತರೊಂದಿಗೆ ಆಚರಿಸಿಕೊಂಡಿದ್ದಾನೆ. ಇಂದು ಬೆಳಗ್ಗೆ ಇಬ್ಬರು ಮನೆಯಿಂದ ಹೊರಬಂದಿದ್ದಾರೆ. ನಂತರ ಸತೀಶ್ ಬೈಕ್‌ನಲ್ಲಿ ತನ್ನ ಲವರ್ ಶ್ವೇತಾಳನ್ನು ಕರೆದುಕೊಂಡು ಮಾಲೂರಿನ ಬ್ಯಾಟರಾಯನಹಳ್ಳಿ ರೈಲ್ವೆ ನಿಲ್ದಾಣದ ಬಳಿಹೋಗಿ ಬೈಕ್ ನಿಲ್ಲಿಸಿದ್ದಾನೆ. ನಂತರ ಕೋಲಾರದಿಂದ ಬೆಂಗಳೂರಿಗೆ ಹೊರಡುವ ರೈಲು ಬರುವುದನ್ನೇ ಕಾದು ನಿಂತಿದ ಪ್ರೇಮಿಗಳು ರೈಲು ಬರುತ್ತಿದ್ದಂತೆ 6.30 ರ ಸುಮಾರಿನಲ್ಲಿ ಇಬ್ಬರೂ ಕೈ-ಕೈ ಹಿಡಿದು ಹಳಿ ಮೇಲೆ ಹಾರಿ ರೈಲಿಗೆ ಸಿಕ್ಕಿ ಆತಹತ್ಯೆ ಮಾಡಿಕೊಂಡಿದ್ದಾರೆ.
ಸುದ್ದಿ ತಿಳಿದು ಕಂಟೋನೆಂಟ್ ರೈಲ್ವೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ಇಬ್ಬರ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿ ಅವರ ಪೋಷಕರಿಗೆ ಮಾಹಿತಿ ತಿಳಿಸಿದ್ದಾರೆ. ಈ ಬಗ್ಗೆ ಕಂಟೋನೆಂಟ್ ರೈಲ್ವೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.