SL Bhyrappa: ಎಸ್‌ಎಲ್ ಭೈರಪ್ಪ ನಿಧನ : ಇಂದು ಮಧ್ಯಾಹ್ನ 2 ಗಂಟೆಯವರೆಗೆ ಬೆಂಗಳೂರಿನಲ್ಲಿ ಅಂತಿಮ ದರ್ಶನ
ನಿನ್ನೆ ವಿಧಿವಶರಾದ ಕನ್ನಡದ ಖ್ಯಾತ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ (94) (SL Bhyrappa) ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅವಕಾಶ ಮಾಡಲಾಗಿದೆ. ಸಾರ್ವಜನಿಕರು, ಅಭಿಮಾನಿಗಳು ಈ ಸಂದರ್ಭದಲ್ಲಿ ಅವರ ದರ್ಶನ ಪಡೆಯಬಹುದು.
ಮಧ್ಯಾಹ್ನ 2 ಗಂಟೆಯ ಬಳಿಕ ಶರೀರವನ್ನು ಮೈಸೂರಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಮೈಸೂರಿನ ಕಲಾ ಮಂದಿರದಲ್ಲಿ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ನಂತರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಚಿತಾಗಾರದಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.
ನಾಳೆ ಮೈಸೂರಿನಲ್ಲಿ ಎಸ್ ಎಲ್ ಭೈರಪ್ಪ ಅಂತ್ಯಕ್ರಿಯೆ
ಎಸ್‌ಎಲ್ ಭೈರಪ್ಪನವರು ಹಾಸನ ಜಿಲ್ಲೆಯಲ್ಲೇ ಹುಟ್ಟಿದ್ರೂ.. ತಮ್ಮ ವಿಶ್ರಾಂತ ಜೀವನವನ್ನು ಮೈಸೂರಿನಲ್ಲಿ ಕಳೆಯುತ್ತಿದ್ದರು. ಹೀಗಾಗಿ ಮೈಸೂರಿನಲ್ಲೇ ಸಕಲ ಸರ್ಕಾರಿ ಗೌರವಗಳೊಂದಿಗೆ ಭೈರಪ್ಪನ ಅಂತ್ಯಕ್ರಿಯೆ ನೆರವೇರಿಸಲು ನಿರ್ಧರಿಸಲಾಗಿದೆ. ವಿದೇಶದಲ್ಲಿರುವ ಭೈರಪ್ಪನವರ ಮಗ, ನಾಳೆ ಮುಂಜಾನೆ ಮೈಸೂರಿಗೆ ಆಗಮಿಸಲಿದ್ದು, ಚಾಮುಂಡಿ ತಪ್ಪಲಿನಲ್ಲಿರೋ ಹರಿಶ್ಚಂದ್ರ ಘಾಟ್ನಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ.