Doctor’s mistake Surgery: ವೈದ್ಯರ ಎಡವಟ್ಟು: ಎಡಗಾಲು ನೋವಿಗೆ ಬಲಗಾಲಿಗೆ ಆಪರೇಷನ್
ವೈದ್ಯೋ ನಾರಾಯಣೋ ಹರಿ ಎನ್ನುತ್ತಾರೆ. ಆದರೆ ವೈದ್ಯರೆ ಎಡವಟ್ಟು ಮಾಡಿದರೆ ರೋಗಿಗಳ ಪಾಡೇನು. ಹಾಸನದಲ್ಲಿ ಇಂತದೊಂದು ಘಟನೆ ನಡೆದಿದ್ದು, ಜಿಲ್ಲಾಸ್ಪತ್ರೆಯ ವೈದ್ಯನೊಬ್ಬ ಮಹಿಳೆಯೊಬ್ಬರ ಎಡಗಾಲಿನ ನೋವಿಗೆ ಬಲಗಾಲಿಗೆ ಆಪರೇಷನ್ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಬೂಚನಹಳ್ಳಿ ಜ್ಯೋತಿ ಎಂಬುವವರಿಗೆ ಎರಡು ವರ್ಷದ ಹಿಂದೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡ ಎಡಗಾಲಿಗೆ ರಾಡ್ ಅಳವಡಿಸಲಾಗಿತ್ತು. ಕಾಲು ನೋವು ಪುನಃ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಿಮ್ಸ್ನ ಡಾ.ಸಂತೋಷ್ ಅವರ ಬಳಿ ತೋರಿಸಿದ್ದರು. ಸೆ.22 ರಂದು ಡಾ.ಸಂತೋಷ್ ಮತ್ತು ಡಾ.ಅಜಿತ್ ಎಂಬುವರು ಶಸ್ತ್ರಚಿಕಿತ್ಸೆ ಮಾಡುವ ವೇಳೆ ಎಡಗಾಲಿನ ಬದಲಾಗಿ ಬಲಗಾಲಿನ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾರೆ. ಆ ಬಳಿಕ ತಪ್ಪಿನ ಅರಿವಾಗಿ ಎಡಕಾಲಿನ ಶಸ್ತ್ರಚಿಕಿತ್ಸೆ ಮಾಡಿ ರಾಡ್ ತೆಗೆದಿದ್ದಾರೆ. ಬಲಗಾಲಿಗೂ ಮತ್ತು ಎಡಕಾಲಿಗೂ ಬ್ಯಾಂಡೇಜ್ ಹಾಕಲಾಗಿದ್ದು, ವೈದ್ಯರ ನಿರ್ಲಕ್ಷ್ಯದ ಬಗ್ಗೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
.