Sharavati pumped storage project: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಸಾಧಕ-ಬಾಧಕಗಳೇನು?
ಓಡುವ ನದಿಗಳು ಸಾಗರವ ಬೆರೆಯಲೇ ಬೇಕು ಎಂಬ ಮಾತೊಂದಿದೆ. ಆದರೆ, ಮನುಷ್ಯ ತನ್ನ ಸ್ವಾರ್ಥಕ್ಕೆ ನೀರು, ಗಾಳಿ ಸೇರಿದಂತೆ ಯಾವುದನ್ನು ಬಿಡುವುದಿಲ್ಲ ಎಂಬುದಕ್ಕೆ ಶರಾವತಿ ನದಿಯೇ ಸಾಕ್ಷಿ. ಶರಾವತಿಗೆ ಅಣೆಕಟ್ಟುಗಳು ಕಟ್ಟಿದ್ದು ಮಾತ್ರವಲ್ಲದೆ. ಈಗ ಶರಾವತಿ ಸಮುದ್ರವನ್ನೆ ಸೇರದ ಹಾಗೆ ಮಾಡಲು ಹೊರಟ್ಟಿದ್ದಾರೆ. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಜನರ ತೀವ್ರ ವಿರೋಧದ ನಡುವೆಯೂ ಎರಡು ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಕಾರ್ಯಗತಗೊಳಿಸಲು ಸರ್ಕಾರ ಸಜ್ಜಾಗಿದೆ.
ಶರಾವತಿ ಪಂಪ್ಡ್ ಸ್ಟೋರೇಜ್ ಸಾಧಕ-ಬಾಧಕದ
ಪಂಪ್ಡ್ ಸ್ಟೋರೇಜ್ ಯೋಜನೆ ವಿಶ್ವದ ಅತಿದೊಡ್ಡ ಬ್ಯಾಟರಿ ತಂತ್ರಜ್ಞಾನ. ಎರಡು ಜಲಾಶಯಗಳ ನಡುವೆ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತದೆ. ಹೆಚ್ಚುವರಿ ವಿದ್ಯುತ್ ಇದ್ದಾಗ ಕೆಳಗಿನ ಜಲಾಶಯದ ನೀರನ್ನು ಮೇಲಿನ ಜಲಾಶಯಕ್ಕೆ ಪಂಪ್ ಮಾಡಿ ಶೇಖರಿಸಲಾಗುತ್ತದೆ. ವಿದ್ಯುತ್ ಬೇಡಿಕೆ ಹೆಚ್ಚಾದಾಗ ಆ ನೀರು ಬಳಸಿ ವಿದ್ಯುತ್ ಉತ್ಪಾದಿಸಿ ಪೂರೈಸಲಾಗುತ್ತದೆ. ಹೊಸ ಜಲಾಶಯ ನಿರ್ಮಾಣ ಮಾಡದೆ ಹೆಚ್ಚು ವಿದ್ಯುತ್ ಉತ್ಪಾದಿಸಲು ಅನುಕೂಲ ಆಗುವುದರಿಂದ ಇದು ಗ್ರಿಡ್ ಸ್ಥಿರತೆ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ತಳಕಳಲೆ ಮತ್ತು ಗೇರುಸೊಪ್ಪ ನಡುವೆ ಮಾಡುತ್ತಿದ್ದು, 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ.
ಸಿಂಗಳೀಕ ಅಭಯಾರಣ್ಯ
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಪ್ರದೇಶ ಸಿಂಗಳೀಕ ಅಭಯಾರಣ್ಯ. ಅತ್ಯಂತ ಸೂಕ್ಷ್ಮ ಪರಿಸರ ಹೊಂದಿರುವ ಈ ಅಭಯಾರಣ್ಯದಲ್ಲಿ 16 ಸಾವಿರ ಮರಗಳನ್ನ ಕಡಿಯುವುದರಿಂದ ಅರಣ್ಯ ನಾಶವಾಗುತ್ತದೆ ಎಂಬುವುದು ಪರಿಸರವಾದಿಗಳ ಆರೋಪ. ಅಪರೂಪದ ಪ್ರಾಣಿ, ಪಕ್ಷಿ, ಜೀವಿ ಮತ್ತು ಸಸ್ಯ ಸಂಕುಲ ಹಾಳುಗೆಡವಿ ಈ ಯೋಜನೆ ಮಾಡುವ ಅಗತ್ಯವೇ ಇಲ್ಲ. ಎರಡು ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಅಷ್ಟೇ ಪ್ರಮಾಣದ ವಿದ್ಯುತ್ ಬೇಕಾಗುತ್ತದೆ ಎಂದಾದರೆ ಈ ಯೋಜನೆ ಮಾಡುವ ಉದ್ದೇಶವೇನು ಎಂಬುದು ಯೋಜನೆ ವಿರೋಧಿಗಳ ಪ್ರಶ್ನೆ.
ಕೆಪಿಸಿಎಲ್ ಹೇಳುವುದೇನು?
ಕೇಂದ್ರ ವಿದ್ಯುತ್ ಪ್ರಾಧಿಕಾರ ಈ ಯೋಜನೆಗೆ ಅನುಮತಿ ನೀಡುವ ಮೊದಲೇ 13 ನಿರ್ದೇಶನಾಲಯಗಳಿಂದ ಅಭಿಪ್ರಾಯ ಸಂಗ್ರಹಣೆ ಮಾಡಿದ್ದು, ಭೂಕುಸಿತ, ಭೂಕಂಪದಂತಹ ಅಪಾಯಗಳು ಉದ್ಭವಿಸುವುದಿಲ್ಲ. ಜೀವವೈವಿಧ್ಯತೆಗೂ ಧಕ್ಕೆಯಾಗುವುದಿಲ್ಲ. ಭೂಮಿಯ ಸ್ಥಿರತೆ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂಬುದನ್ನು ವೈಜ್ಞಾನಿಕವಾಗಿ ತಿಳಿದುಕೊಂಡೆ ಯೋಜನೆಗೆ ಅನುಮತಿ ನೀಡಲಾಗಿದೆ. ಯೋಜನೆಗೆ ಬಳಸಿಕೊಳ್ಳುವ ಅರಣ್ಯ ಪ್ರದೇಶದಷ್ಟೇ ಭೂಮಿಯನ್ನು ಬೇರೆ ಕಡೆ ಅರಣ್ಯೀಕರಣಕ್ಕಾಗಿ ಕೆಪಿಸಿಎಲ್ನಿಂದ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗುವುದು. ರಾಜ್ಯ ವನ್ಯಜೀವಿ ಮಂಡಳಿ, ಕೇಂದ್ರ ವನ್ಯಜೀವಿ ಮಂಡಳಿಗಳೂ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿವೆ.
ಕಣಿವೆಗೆ ಅಪಾಯ?
ಶರಾವತಿ ಕಣಿವೆ ಅತ್ಯಂತ ಸೂಕ್ಷ್ಮ ಪರಿಸರ ವಲಯ ಹೊಂದಿದೆ. ಆದರೆ, ಈ ಕಣಿವೆಯ ಮೇಲೆ ನಡೆದಷ್ಟು ಅತಿಕ್ರಮಣ ರಾಜ್ಯದ ಬೇರಾವುದೇ ಪ್ರದೇಶದಲ್ಲಿಆಗಿಲ್ಲ. ಕಳೆದ 75 ವರ್ಷದಲ್ಲಿ ಈ ಪ್ರದೇಶದಲ್ಲಿ ಲಿಂಗನಮಕ್ಕಿ, ತಳಕಳಲೆ, ಚಕ್ರಾ, ಸಾವೇಹಕ್ಲು, ಮಾಣಿ, ಮಾಣಿ ಪಿಕಪ್, ಗೇರುಸೊಪ್ಪ ಜಲಾಶಯಗಳು, ಹಲವು ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಸಾವಿರಾರು ಹೆಕ್ಟೆರ್ ಅರಣ್ಯ ನಾಶ ಮಾಡಲಾಗಿದೆ.
ಶರಾವತಿ ಕಣಿವೆ 7 ಬೃಹತ್ ಜಲಾಶಯಗಳು, ಜಲವಿದ್ಯುತ್ ಯೋಜನೆಗಳು, ನಾಲೆಗಳು, ಗಣಿಗಾರಿಕೆ, ಏಕಜಾತಿ ನೆಡುತೋಪು, ಅತಿಕ್ರಮಣಗಳಿಂದ ಕತ್ತರಿಸಿಹೋಗಿದೆ. ಕಣಿವೆ ಮತ್ತಷ್ಟು ಛಿದ್ರವಾಗಲು ಅವಕಾಶ ಕೊಡಬಾರದು ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ ನೇತೃತ್ವದ ಸಮಿತಿ 2002ರಲ್ಲೇ ಅಧ್ಯಯನ ವರದಿ ಸಲ್ಲಿಸಿದೆ.
2010ರಿಂದ 2014ರ ನಡುವೆ ಕರ್ನಾಟಕ ಜೀವ ವೈವಿಧ್ಯ ಮಂಡಳಿಯು ಭಾರತೀಯ ವಿಜ್ಞಾನ ಸಂಸ್ಥೆ ಮೂಲಕ ಅಧ್ಯಯನ ನಡೆಸಿದ್ದು, ‘ಶರಾವತಿ ಮತ್ತು ಕಾಳಿ ಕಣಿವೆಗಳು ಬೃಹತ್ ಯೋಜನೆಗಳಿಂದ ಈಗಾಗಲೇ ತಮ್ಮ ಧಾರಣಾ ಶಕ್ತಿ ಕಳೆದುಕೊಂಡಿವೆ. ಹೊಸ ಯೋಜನೆಗಳನ್ನು ಸಹಿಸಿಕೊಳ್ಳುವ ಶಕ್ತಿ ಇಲ್ಲ’ ಎಂದು ಹೇಳಿದೆ. ಈ ನಡುವೆಯೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ಮುಂದಾಗಿರುವುದು 1972ರ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಸೆಕ್ಷನ್ 29ರ ಉಲ್ಲಂಘನೆಯಲ್ಲದೆ, 1980 ಮತ್ತು 2023ರ ವನ ಸಂರಕ್ಷಣಾ ಏವಂ ಸಂವರ್ಧನ ಅಧಿನಿಯಮಕ್ಕೂ ವಿರುದ್ಧವಾಗಿದೆ.