Belgaum Lorry fire; ಬೆಳಗಾವಿಯಲ್ಲಿ ಗೋಮಾಂಸ ಸಾಗಿಸುತ್ತಿದ್ದ ಲಾರಿಗೆ ಬೆಂಕಿ ಹಚ್ಚಿ ಆಕ್ರೋಶ

ಅಕ್ರಮವಾಗಿ ಗೋ ಮಾಂಸ ಸಾಗಾಟ ಮಾಡುತ್ತಿದ್ದ ನಾಲ್ಕು ಲಾರಿಗಳಿಗೆ ವಿಶ್ವ ಹಿಂದು ಪರಿಷತ್ ಮತ್ತು ಭಜರಂಗದಳ ಕಾರ್ಯಕರ್ತರು ಬೆಂಕಿ ಹಚ್ಚಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಪಟ್ಟಣ ಬಳಿ ನಡೆದಿದೆ. ನೆನ್ನೆ ರಾತ್ರಿ ಸುಮಾರು 9.30 ಗಂಟೆಗೆ ಈ ಘಟನೆ ನಡೆದಿದ್ದು, ಕ್ಷಣಾರ್ಧದಲ್ಲೇ ಗೋಮಾಂಸ ಸಾಗಿಸುತ್ತಿದ್ದ ಲಾರಿ ಸುಟ್ಟು ಭಸ್ಮವಾಗಿದೆ. 

ಕುಡಚಿ ಪಟ್ಟಣದಿಂದ ಹೈದರಾಬಾದ್‌ಗೆ ಗೋಮಾಂಸವನ್ನ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ಲಾರಿಯನ್ನ ಗ್ರಾಮಸ್ಥರು ತಡೆದು ಚಾಲಕನಿಗೆ ಥಳಿಸಿ ಕೂಡಿ ಹಾಕಿದ್ದರು. ಬಳಿಕ ಅಂದಾಜು ಏಳು ಕ್ವಿಂಟಲ್‌ನಷ್ಟಿದ್ದ ಗೋಮಾಂಸ ಸಮೇತ ಲಾರಿಗೆ ಗ್ರಾಮಸ್ಥರು ಬೆಂಕಿ ಹಚ್ಚಿದ್ದಾರೆ.

ಈ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಅಥಣಿ ಡಿವೈಎಸ್‌ಪಿ ಮತ್ತು ಕಾಗವಾಡ ಪೊಲೀಸ್ ಠಾಣಾ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಲಾರಿಯಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ, ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಹರಸಾಹಸ ಪಟ್ಟರು.

ಘಟನೆಗೆ ಸಂಬಂಧಿಸಿದಂತೆ ಕಾಗವಾಡ ಪೊಲೀಸ್ ಠಾಣೆಯಲ್ಲಿ‌ ಎರಡು ಪ್ರಕರಣ ದಾಖಲಾಗಿದ್ದು, ಅಕ್ರಮ ಗೋಮಾಂಸ ಸಾಗಿಸುತ್ತಿದ್ದವರ ವಿರುದ್ಧ ಗೋ ಹತ್ಯೆ ನಿಷೇಧ ಕಾಯ್ದೆ ಮತ್ತು ಪ್ರಾಣಿ ಹಿಂಸೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಲಾಗಿದೆ.‌

ಇನ್ನು, ಲಾರಿಗೆ ಬೆಂಕಿ ಹಚ್ಚಿರುವವರ ವಿರುದ್ಧ ದರೋಡೆ ಮತ್ತು ಅಟ್ರಾಸಿಟಿ ಪ್ರಕರಣ ದಾಖಲಾಗಿಸಿಕೊಳ್ಳಲಾಗಿದ್ದು, ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ತನಿಖೆ ತೀವ್ರಗೊಳಿಸಲಾಗಿದ್ದು ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಡಾ.ಭೀಮಾಶಂಕರ ಗುಳೇದ ಅವರು ತಿಳಿಸಿದ್ದಾರೆ.

Rakesh arundi

Leave a Reply

Your email address will not be published. Required fields are marked *