Anjaneyas castes census; ಗಣತಿಯಲ್ಲಿ ಪರಿಶಿಷ್ಟರಿಗೆ ಕ್ರಿಶ್ಚಿಯನ್ ಪದ ಬಳಕೆ ಸಲ್ಲದು; ಎಚ್.ಆಂಜನೇಯ ಆಕ್ರೋಶ

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಗಣತಿ ಕಾರ್ಯದಲ್ಲಿ ಪರಿಶಿಷ್ಟರಿಗೆ ಸೀಮಿತಗೊಳಿಸಿ ಕ್ರಿಶ್ಚಿಯನ್ ಪದ ಜೋಡಿಸಿರುವುದು ಅತ್ಯಂತ ಅಪಾಯಕಾರಿ ನಡೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಆಕ್ರೋಶ ಹೊರಹಾಕಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದ, ಮೇಲ್ವರ್ಗದ ಆಕ್ಷೇಪಗಳಿಗೆ ಮನ್ನಣೆ ನೀಡಿ ಅವರ ಜಾತಿ ಜತೆಗೆ ಕ್ರಿಶ್ಚಿಯನ್ ಪದ ಕೈಬಿಡಲಾಗಿದೆ. ಆದರೆ, ಎಸ್ಸಿ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವುದು ಅಕ್ಷಮ್ಯ ಅಪರಾಧ ಎಂದು ಕಿಡಿಕಾರಿದರು. ಎಸ್ಸಿ ಸಮುದಾಯ ಎಲ್ಲಾ ರಿತಿಯಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿರುವ ವರ್ಗ, ಈ ಗುಂಪಿಗೆ ನ್ಯಾಯಯುತವಾಗಿ ಎಲ್ಲ ಹಕ್ಕುಗಳು, ಸೌಲಭ್ಯ ಕಲ್ಪಿಸಲು ಸಮೀಕ್ಷೆ ಕಾರ್ಯ ಪಾರದರ್ಶಕವಾಗಿ ನಡೆಯಬೇಕು. ಈ ಕಾರಣಕ್ಕೆ ನ್ಯಾ.ನಾಗಮೋಹನ್ ದಾಸ್ ಆಯೋಗ ನಡೆಸಿದ ಗಣತಿಯಲ್ಲಿ ಧರ್ಮದ ಕಾಲಂ ಇರಲಿಲ್ಲ. ಆದರೀಗ ಅದನ್ನು ಸೇರಿಸಿರುವುದೇ ದೊಡ್ಡ ತಪ್ಪು ಎಂದರು.

ಬಿಜೆಪಿ ಒಂದೆಡೆ ಧರ್ಮ ಹಿಂದು ಎಂದು ಬರೆಸುವಂತೆ ಬೊಬ್ಬೆ ಹಾಕುತ್ತಿದೆ. ಈ ಮಧ್ಯೆ ಆಯೋಗ ಮಾದಿಗೆ ಕ್ರಿಶ್ಚಿಯನ್, ಛಲವಾದಿ ಕ್ರಿಶ್ಚಿಯನ್ ಹೀಗೆ ಪರಿಶಿಷ್ಟ ಜಾತಿಗಳನ್ನು ಗುರುತಿಸುವ ಕೆಲಸ ಮಾಡುತ್ತಿದೆ. ಇದು ಎಸ್ಸಿಗಳ ಜನಸಂಖ್ಯೆ ಕುಗ್ಗಿಸುವ ಕುತಂತ್ರ ಒಂದೊಮ್ಮೆ ಮತಾಂತರವಾದವರು ಆ ಧರ್ಮವನ್ನೇ ಬರೆಸುತ್ತಾರೆ. ಆದರೆ, ಆಯೋಗ ಗೊಂದಲ ಉಂಟು ಮಾಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಕೂಡಲೇ ಎಸ್ಸಿ ಜತೆಗೆ ಕ್ರಿಶ್ಚಿಯನ್ ಪದ ತೆಗೆದು ಸಮೀಕ್ಷೆ ಕಾರ್ಯ ಆರಂಭಿಸಬೇಕು. ಇಲ್ಲದಿದ್ದರೆ, ಆಯೋಗದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

Rakesh arundi

Leave a Reply

Your email address will not be published. Required fields are marked *