Chhaya soppu; ಬಂದಿದೆ ಮೇವಿನಂತ ಛಾಯಾ ಸೊಪ್ಪು
ದನಕರುಗಳು ಮಾತ್ರವಲ್ಲದೆ, ಕೋಳಿ, ಮೀನುಗಳು ಮತ್ತು ಮನುಷ್ಯರೂ ತಿನ್ನಬಹುದಾದ ಮೇವಿನ ಜಾತಿಯ ಸೊಪ್ಪು ಬಂದಿದೆ! ಹೌದು, ಜಾನುವಾರುಗಳು ಮಾತ್ರ ವಲ್ಲದೆ ಮಾಂಸ ವೃದ್ಧಿಸಲು ಮೀನು, ಕೋಳಿಗಳಿಗೂ ಆಹಾರವಾಗಿ ನೀಡ ಬಹುದು. ಮನುಷ್ಯರು ಕೂಡ ಸಲಾಡ್ ಮತ್ತು ಪಲ್ಯದ ರೂಪದಲ್ಲಿ ತಿನ್ನಬಹುದು ದಾದ ಸೊಪ್ಪು ಇದಾಗಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ‘ಛಾಯಾ’ ಹೆಸರಿನ ಪೊದೆಯಾಕಾರದ ಸಸ್ಯ ಅಭಿವೃದ್ಧಿಪಡಿಸಿದೆ.
ಛಾಯಾ ಬೆಳೆಯ ತಾಜಾ ಟೊಂಗೆಗಳನ್ನು ತೆಲಾಪಿಯ ಮೀನುಗಳ ಸಾಕಣೆಯಲ್ಲಿಯೂ ಬಳಸುವುದರಿಂದ ಮೀನಿನ ಬೆಳವಣಿಗೆ ಸಾಧ್ಯವಾಗುತ್ತದೆ. ಛಾಯಾ ಸಸ್ಯಗಳ ಮೇವನ್ನುಹೈನೋದ್ಯಮದಲ್ಲಿ ಬಳಸುವುದರಿಂದ ರಾಸುಗಳಿಗೆ ಹಿಂಡಿ, ಬೂಸ ಮತ್ತು ಲವಣ ಮಿಶ್ರಣಗಳಂತೆ ಆಹಾರವಾಗುವುದು.
ನಿತ್ಯ ಹರಿದ್ವರ್ಣ ಜಾತಿಯ ಸಸ್ಯ
ಛಾಯಾ ಬೆಳೆಯು ನಿತ್ಯಹರಿದ್ವರ್ಣ ಜಾತಿಯ ಸಸ್ಯವಾಗಿದೆ. ಈ ಬೆಳೆಯನ್ನು ಹೈನೋದ್ಯಮದಲ್ಲಿ ಮೇವಿನ ಮೂಲವಾಗಿ ಆಳವಡಿಸಿಕೊಳ್ಳುವುದರಿಂದ ವರ್ಷಪೂರ್ತಿ ಹಸಿರು ಮೇವು ಪಡೆಯಬಹುದು. ಅತ್ಯಧಿಕ ಪ್ರೋಟೀನ್ ಅಂಶವನ್ನು ಹೊಂದಿರುವುದರಿಂದ ರಾಸುಗಳ ದೇಹ ರಚನೆ, ಸಂತಾನೋತ್ಪತ್ತಿ, ಹಾಲಿನ ಉತ್ಪಾದಕತೆ, ಮಾಂಸದ ಗುಣಮಟ್ಟದಲ್ಲಿ ಧನಾತ್ಮಕ ಸುಧಾರಣೆಯಾಗಲು ಸಹಕರಿಸುತ್ತದೆ ಎಂದು ಬೆಂಗಳೂರು ಕೃಷಿ ವಿವಿಯ ಮೇವು ಬೆಳೆ ವಿಭಾಗದ ಬೇಸಾಯ ಶಾಸ್ತ್ರಜ್ಞ ಡಾ. ಆರ್. ಮೋಹನ್ ಕುಮಾರ್ ತಿಳಿಸಿದರು.
ಒಮ್ಮೆ ಸಸಿ ನೆಟ್ಟರೆ ಸುಮಾರು 3 ತಿಂಗಳಿಗೆ ಸೊಪ್ಪು ಕೊಯ್ಲಿಗೆ ಬರುತ್ತದೆ. ವರ್ಷಕ್ಕೆ ನಾಲ್ಕು ಬಾರಿ ಕೊಯ್ದು ಮಾಡಬಹುದು. ಅದು ಚಿಗುರಿ ಮತ್ತೆ ಬೆಳೆ ಬರುತ್ತದೆ. ಪೊದೆಯಾಕಾರದಲ್ಲಿ ಸುಮಾರು 4 ರಿಂದ 5 ಅಡಿಗಳಷ್ಟು ಎತ್ತರಕ್ಕೆ ಬೆಳೆಯುತ್ತದೆ. ಒಂದು ವೇಳೆ ಹೆಚ್ಚು ಸಮಯ ಕಟಾವು ಮಾಡದಿದ್ದರೆ ಸುಮಾರು 12 ರಿಂದ 15 ಅಡಿಗಳಷ್ಟು ಎತ್ತರದವರೆಗೆ ಬೆಳೆದು ದಟ್ಟವಾದ ಕಡು ಹಸಿರು ಎಲೆಗಳಿಂದ ಕಂಗೊಳಿಸುತ್ತವೆ. ಇದರ ಮತ್ತೊಂದು ವಿಶೇಷವೆಂದರೆ ಒಂದೂ ಎಲೆಯು ಹಣ್ಣಾಗಿ ಒಣಗುವುದಿಲ್ಲ.
ಪಾಲಕ್, ಬಸಳೆಗಿಂತ ಪೌಷ್ಠಿಕ
ಹಸಿರು ಸೊಪ್ಪು, ತರಕಾರಿಗಳಾದ ಕೋಸು, ಪಾಲಕ್ ಮತ್ತು ಬಸಳೆ ಸೊಪ್ಪುಗಳಿಗಿಂತ ಇದು ಅಧಿಕ ಪೋಷಕಾಂಶಗಳಿಂದ ಕೂಡಿದೆ. ಪ್ರಮುಖವಾಗಿ ಉತ್ತಮ ಗುಣಮಟ್ಟದ ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್ ಸಿ ಮತ್ತು ಎ ಗಳಿಂದ ಸಮೃದ್ಧವಾಗಿದೆ. ಛಾಯಾ ಬೆಳೆಯು ಸ್ವಭಾವತಃ ಒಂದು ಉಷ್ಣವಲಯದ ಬೆಳೆಯಾಗಿದ್ದು, ಸಮಶೀತೋಷ್ಣ ಮತ್ತು ಶೀತವಲಯಗಳಲ್ಲಿಯೂ ಉತ್ತಮ ಇಳುವರಿ ಕೊಡಬಲ್ಲ ಗುಣ ಹೊಂದಿದೆ. ಇದು ಬಹುವಾರ್ಷಿಕ ಬೆಳೆಯಾಗಿರುವುದರಿಂದ ನಾಟಿಯ ಮೊದಲ ಹಂತದಲ್ಲಿ ಅಲ್ಪ ಪ್ರಮಾಣದ ನೀರುಣಿಸಿದರೆ ತದನಂತರ ಬರ ಸಂದರ್ಭದಲ್ಲಿಯೂ ಉತ್ತಮ ಗುಣಮಟ್ಟದ ಹಸಿರು ಎಲೆಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಬೇಸಿಗೆಯಲ್ಲೂ ಹಚ್ಚಹಸಿರು
ದನಕರುಗಳಿಗೆ ಹಸಿರು ಮೇವಿನ ಬಾಧೆ ಪಶು ಪಾಲಕರನ್ನು ತೀವ್ರವಾಗಿ ಬಾಧಿ ಸುತ್ತಿದೆ. ಅದರಲ್ಲೂ ಬೇಸಿಗೆಯಲ್ಲಿ ಹಸಿರು ಮೇವು ಸಿಗದೆ ರೈತರು ಹಸು, ಎಮ್ಮೆ, ಎತ್ತುಗಳನ್ನು ಸಾಕಲು ಕಷ್ಟ ಪಡುತ್ತಿದ್ದರು. ಹಾಲು ಕೊಡುವ ಹಸು, ಎಮ್ಮೆಗಳಿಗೆ ದೂರದ ಭಾಗಗಳಿಂದ ದುಬಾರಿ ಬೆಲೆ ತೆತ್ತು ಹಸಿರು ಮೇವು ಖರೀದಿಸಿ ತರುತ್ತಿದ್ದರು. ಈಗ ಛಾಯಾ ಬೆಳೆಯು ರೈತರ ಈ ಸಮಸ್ಯೆ ದೂರ ಮಾಡಲಿದೆ. ಬೇಸಿಗೆಯಲ್ಲೂ ಹಸಿರು ಸೊಪ್ಪು ಸಿಗಲಿದೆ.
ಒಣಭೂಮಿಯ ಬೆಳೆ, ರೋಗ ಬಾಧೆ ಇಲ್ಲ
ಮೂಲತಃ ಮೆಕ್ಸಿಕೊ ದೇಶದ ನಿತ್ಯ ಹರಿದ್ವರ್ಣ ಜಾತಿಗೆ ಸೇರಿದ ಬೆಳೆಯಾಗಿರುವ ಛಾಯಾ ಹಲವು ರೀತಿಯಲ್ಲಿ ಬಳಕೆಯಾಗುತ್ತಿರುವುದು ಕಂಡು ಬಂದಿದೆ. ಒಣ ಭೂಮಿಯಲ್ಲೂ ಬೆಳೆಯಬಹುದು. ಈ ಬೆಳೆಗೆ ಕೀಟ, ರೋಗ ಬಾಧೆಯೂ ಇಲ್ಲ. ಅತಿ ಹೆಚ್ಚು ಪ್ರೋಟೀನ್ ಇದ್ದು, ಬರ ಸಹಿಷ್ಣುತೆ ಹೊಂದಿದೆ. ಈ ಬೆಳೆಯನ್ನು ಉತ್ತಮ ಬೇಸಾಯ ಕ್ರಮಗಳೊಂದಿಗೆ ಬೆಳೆದರೆ ವಾರ್ಷಿಕವಾಗಿ ಪ್ರತಿ ಹೆಕ್ಟೇರ್ ಪ್ರದೇಶಕ್ಕೆ ಸುಮಾರು 1,500 ರಿಂದ 2,000 ಕ್ವಿಂಟಾಲ್ ಗಳಷ್ಟು ಹಸಿರು ಎಲೆಗಳನ್ನು ಉತ್ಪಾದಿಸಬಹುದಾಗಿದೆ.
ಬೇಸಿಗೆ ಸೇರಿದಂತೆ ವರ್ಷದ ಎಲ್ಲಾ ಕಾಲಗಳಲ್ಲಿಯೂ ಹಸಿರು ಮೇವು ಬೆಳೆಯಬಹುದು. ಬೆಳೆ ಉತ್ಪಾದನೆಗೆ ಯೋಗ್ಯವಲ್ಲದ ನಿರ್ಲಕ್ಷಿತ ಪ್ರದೇಶಗಳಲ್ಲಿ ಬೆಳೆಯುವುದರಿಂದ ಜಮೀನಿನ ಹಸಿರೀಕರಣದ ಜತೆಗೆ ಉತ್ತಮ ಮೇವು ಉತ್ಪಾದಿಸಬಹುದು ಎಂದು ಡಾ. ಎಸ್ ವಿ ಸುರೇಶ್ ಕುಲಪತಿ, ಬೆಂಗಳೂರು ಕೃಷಿ ವಿವಿ ತಿಳಿಸಿದ್ದಾರೆ.