Banking jobs Recruitment: ಬ್ಯಾಂಕಿಂಗ್ ಉದ್ಯೋಗ: 60,000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಚಾಲನೆ
ಉದ್ಯೋಗದ ಹುಡುಕಾಟದಲ್ಲಿರುವ ಯುವಜನರಿಗೆ ಶುಭಸುದ್ದಿ, ಏಕೆಂದರೆ, ಬ್ಯಾಂಕಿಂಗ್ ಮಹಾ ಉದ್ಯೋಗ ಅಭಿಯಾನವೇ ಶುರುವಾಗಿದೆ. ಈಗಾಗಲೇ 60,000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಚಾಲನೆ ಸಿಕ್ಕಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಸಾವಿರಾರು ಹುದ್ದೆಗಳ ನೇಮಕಾತಿಯನ್ನು ನಿರೀಕ್ಷಿಸಲಾಗಿದೆ.
ಕಳೆದ ಕೆಲವು ವರುಷಗಳಿಂದ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಸರಿಯಾದ ನೇಮಕ ಪ್ರಕ್ರಿಯೆಗಳೇ ನಡೆದಿಲ್ಲ. ಕೊರೊನಾ ನಂತರದ ಕಾಲಘಟ್ಟದಲ್ಲಿ ವೆಚ್ಚ ಕಡಿತ ಸೇರಿದಂತೆ ಅನೇಕ ಕಾರಣಗಳಿಂದ ಬ್ಯಾಂಕ್‌ಗಳು ನಿರೀಕ್ಷಿತ ಮಟ್ಟದಲ್ಲಿ ನೇಮಕಾತಿ ನಡೆಸಿಲ್ಲ. ಪರಿಣಾಮ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿ ಉಳಿದಿವೆ. ಸಿಬ್ಬಂದಿಯ ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಈ ವರ್ಷದ ಆರಂಭದಿಂದಲೇ ಹಲವು ಬ್ಯಾಂಕ್‌ಗಳು ಸಾವಿರಾರು ನೇಮಕಾತಿಗೆ ಚಾಲನೆ ನೀಡಿದವು. ಪರಿಣಾಮವಾಗಿ ಪ್ರಕ್ರಿಯೆ ಆರಂಭವಾಗಿದೆ.
ಈ ವರ್ಷ ಬ್ಯಾಂಕಿಂಗ್ ವಲಯದಲ್ಲಿ ಸುಮಾರು 60,000 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂದು ಅಧಿಕೃತವಾಗಿ ಸರಕಾರವೇ ತಿಳಿಸಿದೆ. ಆದರೆ, ಬ್ಯಾಂಕ್‌ಗಳು ಸದ್ಯ ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸಲು ಇದು ಏನೇನೂ ಸಾಲದು, ಬ್ಯಾಂಕಿಂಗ್ ವಲಯ ತನ್ನ ಟಾರ್ಗೆಟ್ ಮುಟ್ಟಬೇಕೆಂದರೆ ತುರ್ತಾಗಿ ಒಂದು ಲಕ್ಷದಷ್ಟು ಸಿಬ್ಬಂದಿ ಅಗತ್ಯವಿದೆ ಎಂದು ರಮಾನಂದ ಶರ್ಮಾ ನಿವೃತ್ತ ಬ್ಯಾಂಕರ್ ತಿಳಿಸಿದ್ದಾರೆ.