Complaint she box: ದೌರ್ಜನ್ಯ ದೂರು ಸ್ವೀಕಾರಕ್ಕೆ ಶಿ-ಬಾಕ್ಸ್
ಲೈಂಗಿಕ ಕಿರುಕುಳ, ಲಿಂಗ ತಾರತಮ್ಯ, ಸ್ರ್ತೀಶೋಷಣೆಯಂತಹ ದೂರುಗಳ ಸ್ವೀಕಾರಕ್ಕೆ ಬೆಂಗಳೂರು ವಿವಿಯಲ್ಲಿ ‘ಶಿ-ಬಾಕ್ಸ್ ಲೈಂಗಿಕ ಕಿರುಕುಳ ದೂರು ಪೆಟ್ಟಿಗೆ’ ಸ್ಥಾಪಿಸಲಾಗಿದೆ. ಇದರ ಮೂಲಕ ವಿದ್ಯಾರ್ಥಿನಿಯರು ಮತ್ತು ಮಹಿಳಾ ಸಿಬ್ಬಂದಿ ಮಾತ್ರವೇ ದೂರು ದಾಖಲಿಸಬೇಕೆಂದಿಲ್ಲ. ಬದಲಾಗಿ ಎಲ್ಲಾ ವಿದ್ಯಾರ್ಥಿಗಳೂ ದೂರು ನೀಡಬಹುದಾಗಿದೆ.
ಸುರಕ್ಷತೆ, ಅನ್ಯಾಯದ ಪರ ಧ್ವನಿ, ಹಕ್ಕುಗಳಿಗಾಗಿ ಹೋರಾಟ ಎಂಬ ಪರಿಕಲ್ಪನೆ ಅಡಿಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬೆಂಗಳೂರು ವಿಶ್ವವಿದ್ಯಾಲಯವು ಲಿಂಗ ತಾರತಮ್ಯ ಸಂವೇದನೆ ಕೋಶವನ್ನು ತೆರೆದಿದೆ.
ಸಾಮಾನ್ಯವಾಗಿ ಮಹಿಳೆಯರು ಕೆಲಸ ಮಾಡುವ ಕಡೆ ಪೋಷ್ (ಲೈಂಗಿಕ ಕಿರುಕುಳ ತಡೆ) ಕಮಿಟಿ ಇರಲಿದೆ. ಇದೇ ಮಾದರಿಯಲ್ಲಿ ಲಿಂಗ ತಾರತಮ್ಯ ಸಂವೇದನೆ ಕೋಶ ಕಾರ್ಯ ನಿರ್ವಹಿಸಲಿದೆ. ಈ ಕೋಶವು ಶಿ ಬಾಕ್ಸ್ ಮೂಲಕ ದೂರು ಸ್ವೀಕರಿಸಲಿದೆ. ಆಡಳಿತ ಕಚೇರಿಯಲ್ಲಿ ‘ಶಿ ಬಾಕ್ಸ್’ ಸ್ಥಾಪಿಸಲಾಗಿದೆ. ಈ ಬಾಕ್ಸ್ ಅನ್ನು ಶೀಘ್ರವೇ ಇತರೆ ಎಲ್ಲ ವಿಭಾಗಗಳಿಗೂ ವಿಸ್ತರಿಸುವ ಆಲೋಚನೆಯನ್ನು ಲಿಂಗ ಸಂವೇದನೆ ಕೋಶ ಹೊಂದಿದೆ. ಇದು ಮಾತ್ರವಲ್ಲದೆ, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ shailashreenodalofficer@gmail.com ಇ-ಮೇಲ್ ಮೂಲಕವೂ ದೂರು ದಾಖಲಿಸಬಹುದಾಗಿದೆ.
ಎರಡು ದೂರು ದಾಖಲು
ಇತ್ತೀಚೆಗಷ್ಟೇ ಆಡಳಿತ ಕಚೇರಿಯಲ್ಲಿ ಬಾಕ್ಸ್ ಇಡಲಾಗಿದ್ದು, ತಕ್ಷಣವೇ ಎರಡು ದೂರುಗಳು ಸಲ್ಲಿಕೆಯಾಗಿವೆ. ಬೆಂವಿವಿ ವಿಭಾಗವೊಂದರಲ್ಲಿ ಅತಿಥಿ ಉಪನ್ಯಾಸಕರೊಬ್ಬರು ಪಾಠ ಹೇಳಿಕೊಡುವ ನೆಪದಲ್ಲಿ ಮೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾರೆಂದು ವಿದ್ಯಾರ್ಥಿನಿಯೊಬ್ಬರು ದೂರು ಸಲ್ಲಿಸಿದ್ದಾರೆ. ಮತ್ತೊಂದು ವಿಭಾಗದಲ್ಲಿ ವಿಭಾಗದ ನಿರ್ದೇಶಕರೇ ಪ್ರಾಯೋಗಿಕ ಶಿಕ್ಷಣದ ನೆಪದಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿ ದೂರು ಸಲ್ಲಿಸಿದ್ದಾರೆ. ಎರಡು ದೂರುಗಳನ್ನು ಪರಿಶೀಲಿಸಿ ಇಬ್ಬರು ಆರೋಪಿಗಳಿಗೆ ನೋಟಿಸ್ ನೀಡಿ, ಅವರ ಪ್ರತಿಕ್ರಿಯೆ ಕೇಳಲಾಗಿದೆ. ಅವರು ನೀಡುವ ಉತ್ತರವನ್ನು ಕುಲಸಚಿವರ ಗಮನಕ್ಕೆ ತಂದು ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಿದೆ.
ಕಾನೂನು ಪ್ರಕಾರ ಕ್ರಮ
ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ನೀಡುವ ದೂರುಗಳನ್ನು ಆಂತರಿಕ ದೂರು ಸಮಿತಿ (ಐಸಿಸಿ) ವಾರಕ್ಕೊಮ್ಮೆ ಪರಿಶೀಲಿಸಲಿದೆ. ಈ ಸಮಿತಿಯಲ್ಲಿ ವಿಶ್ವವಿದ್ಯಾಲಯದ ನಾನಾ ವಿಭಾಗಗಳ ಪ್ರೊಫೆಸರ್ ಹಾಗೂ ಸರಕಾರೇತರ ಸಂಘ ಸಂಸ್ಥೆ(ಎನ್ ಜಿಒ)ಯ ಸಮಾಲೋಚಕರಿದ್ದಾರೆ. ನಾನಾ ಮಾಧ್ಯಮಗಳ ಮೂಲಕ ಸ್ವೀಕೃತವಾಗಿರುವ ದೂರುಗಳನ್ನು ಪರಿಶೀಲಿಸಿ. ನೋಟಿಸ್ಸ್ ಜಾರಿ ಮಾಡಿ ಕಾನೂನು ಪ್ರಕಾರ ಸಮಿತಿಯು ಕ್ರಮ ಜರುಗಿಸಲಿದೆ.
ಸಾವಿರಾರು ವಿದ್ಯಾರ್ಥಿಗಳು ಮತ್ತು ನೂರಾರು ನೌಕರರು ಕರ್ತವ್ಯ ನಿರ್ವಹಿಸುವ ವಿಶ್ವವಿದ್ಯಾಲಯಗಳಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳು ಇದ್ದೇ ಇರುತ್ತವೆ. ದೂರುದಾರರಿಗೆ ಭಯ ಬೇಡ. ಹೆಸರುಗಳನ್ನು ಗೌಪ್ಯವಾಗಿಡುತ್ತೇವೆ. ‘ಶಿ ಬಾಕ್ಸ್’ಗೆ ದೂರುಗಳನ್ನು ಸಲ್ಲಿಸಬಹುದು ಎಂದು ಡಾ. ಬಿ ಶೈಲಶ್ರೀ ನೋಡಲ್ ಅಧಿಕಾರಿ, ಲಿಂಗ ಸಂವೇದನ ಕೋಶ ಬೆಂ.ವಿವಿ ಅವರು ತಿಳಿಸಿದ್ದಾರೆ.
ವಿಶ್ವವಿದ್ಯಾಲಯಗಳಲ್ಲಿ ಸಂವೇದನೆ ಕೋಶ ಅತ್ಯಂತ ಅವಶ್ಯಕವಾಗಿದೆ. ಹೆಣ್ಣು-ಗಂಡು ಎಂಬ ಲಿಂಗ ತಾರತಮ್ಯ, ಹೆಣ್ಣಿನ ಶೋಷಣೆಯಂತಹ ಯಾವುದೇ ಸಮಸ್ಯೆಗಳು ಎದುರಾದಾಗ ವಿದ್ಯಾರ್ಥಿಗಳು, ಸಿಬ್ಬಂದಿ ಯಾವುದೇ ಭಯವಿಲ್ಲದೆ ದೂರು ನೀಡಬಹುದು. ಪರಿಶೀಲಿಸಿ ಶಿಸ್ತು ಕ್ರಮ ಜರುಗಿಸುತ್ತೇವೆ ಎಂದು ಕೆ.ಟಿ ಶಾಂತಲಾ ಕುಲಸಚಿವರು(ಆಡಳಿತ), ಬೆಂಗಳೂರು ವಿವಿ ಅವರು ತಿಳಿಸಿದ್ದಾರೆ.