CM given deadline: ಒಂದು ತಿಂಗಳೊಳಗೆ ರಸ್ತೆ ಗುಂಡಿ ಮುಚ್ಚುವಂತೆ ಅಧಿಕಾರಿಗಳಿಗೆ ಸಿಎಂ ಗಡುವು
ಬೆಂಗಳೂರಿನ ಹದಗೆಟ್ಟ ರಸ್ತೆಗಳನ್ನು ಸರಿಪಡಿಸುವಂತೆ ಸಿದ್ದರಾಮಯ್ಯ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಒಂದು ತಿಂಗಳೊಳಗೆ ರಸ್ತೆಗಳನ್ನು ಸರಿಪಡಿಸಲು ಗಡುವು ನೀಡಿದ್ದಾರೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳನ್ನುಅಮಾನತು ಮಾಡುವುದಾಗಿ ಅವರು ಎಚ್ಚರಿಸಿದ್ದಾರೆ.
ನಗರ ರಸ್ತೆಗಳ ಸುಧಾರಣೆ ಹಾಗೂ ಸಂಚಾರ ವ್ಯವಸ್ಥೆ ಕುರಿತು ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಸಿದ್ದರಾಮಯ್ಯ, ರಸ್ತೆ ಗುಂಡಿ ಸಮಸ್ಯೆ ಹೆಚ್ಚಳಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯುದ್ದಕ್ಕೂ ವಾರ್ಡ್ ಎಂಜಿನಿಯರ್, 5 ಪಾಲಿಕೆಗಳ ಮುಖ್ಯ ಎಂಜಿನಿಯರ್ ಸೇರಿದಂತೆ ಅಧಿಕಾರಿಗಳ ವಿರುದ್ಧ ಗರಂ ಆದರು.
ರಸ್ತೆ ಗುಂಡಿಗಳಿಂದ ಜನರು ಹೈರಾಣಾಗಿದ್ದು, ಜನರ ಸಂಕಷ್ಟ ನಿಮ್ಮ ಕಣ್ಣಿಗೆ ಬೀಳುತ್ತಿಲ್ಲವೇ. ಸಮಸ್ಯೆಗೆ ತುರ್ತು ಕ್ರಮ ತೆಗೆದುಕೊಳ್ಳಲು ನಿರ್ಲಕ್ಷ್ಯವಹಿಸುತ್ತಿರುವುದೇಕೆ? ಗುಂಡಿ ಮುಚ್ಚಿ ಎಂದು ನಾವು ಕರೆದು ಹೇಳಬೇಕೇ? ನೀವು ಎಂಜಿನಿಯರಿಂಗ್ ಓದಿರೋದು ಏಕೆ? ರಸ್ತೆಗಳ ಸುಸ್ಥಿತಿ ಬಗ್ಗೆ ಗಮನಹರಿಸುವುದು ನಿಮ್ಮ ಕೆಲಸವಲ್ಲವೇ?
ಗುಂಡಿಗಳನ್ನು ಮುಚ್ಚಲು ನಿಮಗೇನು ಕಷ್ಟ? ನಿಮ್ಮಿಂದಾಗಿ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ನಿಮ್ಮನ್ನು ಸಸ್ಪೆಂಡ್ ಮಾಡಿ ಮನೆಗೆ ಕಳುಹಿಸುವವರೆಗೆ ಬುದ್ಧಿ ಬರುವುದಿಲ್ಲ ಅನಿಸುತ್ತಿದೆ. ನಡವಳಿಕೆ ಬದಲಾಗದಿದ್ದರೆ ತಲೆದಂಡ ಖಚಿತ. ಇದರಲ್ಲಿ ಯಾವ ಮುಲಾಜೂ ಇಲ್ಲ, ಎಂದು ಸಿಎಂ ಕೆಂಡಾಮಂಡಲವಾಗಿದ್ದಾರೆ.
ಮಳೆಗಾಲಕ್ಕೆ ಮುನ್ನವೇ ರಸ್ತೆ ಕಾಮಗಾರಿಗಳನ್ನು ಯಾಕೆ ಮಾಡುತ್ತಿಲ್ಲ? ಮಳೆಗಾಲದಲ್ಲಿಯೇ ಏಕೆ ಪ್ರಾರಂಭಿಸುತ್ತೀರಿ? ಜಿಬಿಎ ನೂತನ ಆಯುಕ್ತರು ಫೀಲ್ಡ್ ವರ್ಕ್ ಮಾಡಿ, ನಿಗಾ ವಹಿಸಬೇಕು. ಒಂದು ತಿಂಗಳೊಳಗೆ ಎಲ್ಲ ರಸ್ತೆ ಗುಂಡಿಗಳನ್ನು ವೈಜ್ಞಾನಿಕ ರೀತಿಯಲ್ಲಿ ಮುಚ್ಚಬೇಕು. ಈ ಬಗ್ಗೆ ಮತ್ತೆ 15 ದಿನಗಳ ಬಳಿಕ ಸಭೆ ನಡೆಸಿ ಪ್ರಗತಿ ಪರಿಶೀಲನೆ ಮಾಡುತ್ತೇನೆ. ನಗರದ ರಸ್ತೆಗಳನ್ನು ಸುಸ್ಥಿತಿಯಲ್ಲಿ ಉಳಿಸಿಕೊಳ್ಳುವ ವಿಚಾರದಲ್ಲಿ ಮೆಟ್ರೋ, ಜಲಮಂಡಳಿ, ಬೆಸ್ಕಾಂ, ಬಿಡಿಎ ನಡುವೆ ಸಮನ್ವಯ ಅಗತ್ಯ. ಈ ವಿಚಾರದಲ್ಲಿ ವಾರಕ್ಕೊಮ್ಮೆ ಸಭೆ ನಡೆಸಬೇಕು,” ಎಂದು ಜಿಬಿಎ ಮುಖ್ಯ ಆಯುಕ್ತರಿಗೆ ಸಿಎಂ ಸೂಚಿಸಿದರು.
ರಸ್ತೆ ಗುಂಡಿ, ಕಾಮಗಾರಿಗಳ ವಿವರ
- ನಗರದಲ್ಲಿ108.20 ಕಿ.ಮೀ. ಉದ್ದದ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದೆ. 143.68 ಕಿ.ಮೀ ಉದ್ದದ ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದೆ.
- ಈಗಾಗಲೇ 401.63 ಕಿ.ಮೀ. ರಸ್ತೆಗಳು ಡಾಂಬರೀಕರಣಗೊಂಡಿದ್ದು, 440.92 ಕಿ.ಮೀ ಡಾಂಬರೀಕರಣ ಕಾಮಗಾರಿ ಪ್ರಗತಿಯಲ್ಲಿದೆ.
- ಒಟ್ಟಾರೆ 584.60 ಕಿ.ಮೀ. ಉದ್ದದ ರಸ್ತೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.
- ನೂತನ ತಂತ್ರಜ್ಞಾನ ಬಳಸಿ ತೇವಾಂಶವಿರುವ ಸಮಯದಲ್ಲಿಯೂ ಗುಂಡಿಗಳನ್ನು ಮುಚ್ಚಬಹುದಾಗಿದೆ.
- ಐದೂ ಪಾಲಿಕೆಗಳೊಂದಿಗೆ ಸಮನ್ವಯ ಸಾಧಿಸಲು ಒಬ್ಬ ತಾಂತ್ರಿಕ ಸಮನ್ವಯಾಧಿಕಾರಿ ನೇಮಿಸಲು ನಿರ್ಧಾರ.
- ಇಬ್ಬಲೂರು ಜಂಕ್ಷನ್, ಅಗರ, ವೀರಣ್ಣನ ಪಾಳ್ಯ, ನಾಗವಾರ ಮತ್ತು ಹೆಬ್ಬಾಳ ಜಂಕ್ಷನ್‌ಗಳು ಜಲಮಂಡಳಿ ಮತ್ತು ಮೆಟ್ರೋ ಕಾಮಗಾರಿಯಿಂದ ಹಾಳಾಗಿವೆ. ಈ ಜಂಕ್ಷನ್‌ಗಳನ್ನು 400 ಕೋಟಿ ರೂ. ವೆಚ್ಚದಲ್ಲಿ ಹೊರವರ್ತುಲ ರಸ್ತೆ ಅಭಿವೃದ್ಧಿ ಯೋಜನೆಯಡಿ ಸಮಗ್ರವಾಗಿ ಅಭಿವೃದ್ದಿಪಡಿಸಲು ತೀರ್ಮಾನ.