Actor Darshan: ನಟ ದರ್ಶನ್ ಜೈಲಿನಲ್ಲಿ ಕನಿಷ್ಠ ಸೌಲಭ್ಯ ನೀಡಲು ಮನವಿ: ಅರ್ಜಿ ವಿಚಾರಣೆ ಸೆ.22ಕ್ಕೆ ಮುಂದೂಡಿಕೆ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಜೈಲಿನಲ್ಲಿ ಕೆಲ ಸೌಲಭ್ಯ ಕಲ್ಪಿಸುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮತ್ತೆ ಸೆ.25 ಕ್ಕೆ ಮುಂದೂಡಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ಪಾಲಾಗಿರುವ ದರ್ಶನ್ ಕೆಲ ಮೂಲಸೌಕರ್ಯಕ್ಕೆ ಬೇಡಿಕೆ ಇಟ್ಟಿದ್ದರು. ಕಳೆದ ವಾರ ಮೂಲ ಸೌಕರ್ಯ ನೀಡಿ ಅಂತ ಕೋರ್ಟ್ ಆದೇಶ ಮಾಡಿತ್ತು. ಕೋರ್ಟ್ ಆದೇಶ ನೀಡಿ ಹಲವು ದಿನಗಳು ಕಳೆದರೂ ದರ್ಶನ್ ಗೆ ಯಾವುದೇ ಹಾಸಿಗೆ, ತಲೆದಿಂಬುಗಳನ್ನು ಜೈಲಾಧಿಕಾರಿಗಳು ಒದಗಿಸಿಲ್ಲ. ಇದರಿಂದ ದರ್ಶನ್ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದರು.

ಕೊಲೆ ಕೇಸ್ ನಲ್ಲಿ ಎರಡನೇ ಬಾರಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಗೆ ಈ ಬಾರಿ ಜೈಲಿನಲ್ಲಿ ಯಾವುದೇ ಸೌಲಭ್ಯ, ರಾಜಾತಿಥ್ಯ ನೀಡಿಲ್ಲ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಜೈಲಿನಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಲಾಗಿದೆ. ಆರೋಪಿಗಳು, ಕೈದಿಗಳಿಗೆ ಯಾವುದೇ ರಾಜಾತಿಥ್ಯ, ಸೌಲಭ್ಯಗಳನ್ನು ನೀಡುವಂತಿಲ್ಲ ಎಂದು ಆದೇಶ ಹೊರಡಿಸಿತ್ತು..

ಆದರೆ ಕನಿಷ್ಠ ಮೂಲಭೂತ ಸೌಕರ್ಯ ನೀಡಬೇಕೆಂದು ನಿಯಮಗಳಿದ್ದು ಅದನ್ನು ಕೂಡ ಜೈಲಿನಲ್ಲಿ ನೀಡುತ್ತಿಲ್ಲ, ಜೈಲಿನಲ್ಲಿ ಹಾಸಿಗೆ, ದಿಂಬಿನಂತಹ ಕನಿಷ್ಠ ಸೌಲಭ್ಯವನ್ನೂ ನೀಡಬೇಕೆಂದು ಒತ್ತಾಯಿಸಿ ನಟ ದರ್ಶನ್ ಅರ್ಜಿ ಸಲ್ಲಿಸಿದ್ದರು.

ಇಂದು ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್ ಮತ್ತೆ ಸೆ.25 ಕ್ಕೆ ವಿಚಾರಣೆ ಮುಂದೂಡಿದೆ.

Rakesh arundi

Leave a Reply

Your email address will not be published. Required fields are marked *