Huvina baanadante: ‘ಹೂವಿನ ಬಾಣದಂತೆ ‘ ವೈರಲ್ ಹುಡುಗಿ ಬಗ್ಗೆ ಇಲ್ಲಿವೆ ಇಂಟ್ರೆಸ್ಟಿಂಗ್ ಮಾಹಿತಿ
‘ಹೂವಿನ ಬಾಣದಂತೆ ಯಾರಿಗೂ ಕಾಣದಂತೆ’ ಈ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿ, ರಾತ್ರೋರಾತ್ರಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮೊಸಳೆಕೊಪ್ಪ ಗ್ರಾಮದ ಯುವತಿ ನಿತ್ಯಶ್ರೀ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ.
‘ಬಿರುಗಾಳಿ’ ಚಿತ್ರದ ‘ಹೂವಿನ ಬಾಣದಂತೆ ಯಾರಿಗೂ ಕಾಣದಂತೆ’ ಎಂಬ ಹಾಡನ್ನು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಹಾಡಿ ವೈರಲ್ ಆದ ನಿತ್ಯಶ್ರೀ, ಒಂದೆಡೆ ಸ್ಯಾಂಡಲ್‌ವುಡ್ ಗಮನ ಸೆಳೆದಿದ್ದರೆ, ಇನ್ನೊಂದೆಡೆ ತಾವು ಹಾಡಿದ ರೀತಿಗಾಗಿ ಕೊಂಚ ಪಶ್ಚಾತ್ತಾಪದಲ್ಲೂ ಇದ್ದಾರೆ.
ಕೆಲವೇ ದಿನಗಳ ಹಿಂದೆ ಸ್ನೇಹಿತರೊಂದಿಗೆ ತಮಾಷೆಗಾಗಿ ಹಾಡಿದ ಹಾಡು, ನಿತ್ಯಶ್ರೀಯವರನ್ನು ಅನಿರೀಕ್ಷಿತವಾಗಿ ಟ್ರೆಂಡಿಂಗ್ ಸ್ಟಾರ್ ಆಗಿ ಪರಿವರ್ತಿಸಿತು. ಅವರ ವಿಶಿಷ್ಟ ಹಾಡುವ ಶೈಲಿ, ಉಚ್ಚಾರಣೆ ಮತ್ತು ಮುಗ್ಧತೆ ಯುವಜನತೆಯನ್ನು ಆಕರ್ಷಿಸಿದೆ.
ಪದವಿ ಶಿಕ್ಷಣ ಪಡೆಯಲು ಮೈಸೂರಿಗೆ ಬಂದಿದ್ದ ನಿತ್ಯಶ್ರೀ, ವೈರಲ್ ಹಾಡಿನ ಬಗ್ಗೆ ಮಾತನಾಡಿ, ನಾನು ನನ್ನ ಸ್ನೇಹಿತರನ್ನು ಖುಷಿ ಪಡಿಸಲು ಹಾಡಿದ್ದೆ. ಇದು ಇಷ್ಟು ವೈರಲ್ ಆಗತ್ತೆ ಎಂದು ಗೊತ್ತಿರಲಿಲ್ಲ. ತುಂಬಾ ಖುಷಿ ಆಗಿದೆ.
ಸ್ನೇಹಿತರು ನನ್ನ ಹಾಡು ಕೇಳಿ ನಕ್ಕುನಕ್ಕು ಖುಷಿ ಪಟ್ಟರು. ನನ್ನ ಗುರುಗಳಾದ ಕೃಷ್ಣಮೂರ್ತಿ ಸರ್ ಹಾಡನ್ನು ರೆಕಾರ್ಡ್ ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ರು. ಅದು ರಾತ್ರೋರಾತ್ರಿ ಸಕ್ಕತ್ ವೈರಲ್ ಆಗಿದೆ. ಎಲ್ಲರೂ ಕೂಡ ನನ್ನ ಗುರುತು ಹಿಡಿತಿದ್ದಾರೆ. ನನ್ನ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ನನಗೆ ನಟಿ ಆಗಬೇಕು, ಆ್ಯಕ್ಟಿಂಗ್ ಮಾಡಬೇಕು ಎಂಬ ಆಸೆ ಇದೆ. ಯಶ್ ನನ್ನ ಫೇವರಿಟ್ ನಟ. ಅವರ ಜೊತೆ ಒಂದು ಸೈಡ್ ರೋಲ್ ಮಾಡಬೇಕು ಎಂದಿದ್ದಾರೆ.
ನನ್ನ ತಂದೆಗೆ ನಾನು ನಟಿ ಆಗಬೇಕು ಎಂಬ ಆಸೆ ಇದೆ. ಅವಕಾಶ ಸಿಕ್ಕರೆ ಖಂಡಿತ ಆ್ಯಕ್ಟ್ ಮಾಡ್ತೀನಿ. ಒಂದಷ್ಟು ಜನ ಬ್ಯಾಡ್ ಕಾಮೆಂಟ್ ಮಾಡ್ತಿದ್ದಾರೆ. ಆದರೆ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಲ್ಲ. ನನ್ನಿಂದ ಒಂದಷ್ಟು ಜನ ನಕ್ಕಿದ್ರು ಅನ್ನೋ ಖುಷಿ ಇದೇ ಎಂದು ನಿತ್ಯಾಶ್ರೀ ಹೇಳಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಕೇವಲ 150 ಹಿಂಬಾಲಕರನ್ನು ಹೊಂದಿದ್ದ ನಿತ್ಯಶ್ರೀ, ಈ ಹಾಡು ವೈರಲ್ ಆದ ನಂತರ 47,000ಕ್ಕೂ ಹೆಚ್ಚು ಹಿಂಬಾಲಕರನ್ನು ಗಳಿಸುವ ಮೂಲಕ ಸೋಷಿಯಲ್ ಮೀಡಿಯಾದ ಶಕ್ತಿಯನ್ನು ಸಾಬೀತುಪಡಿಸಿದರು. ಈ ಹಾಡು ಲಕ್ಷಾಂತರ ವೀಕ್ಷಣೆಗಳನ್ನು ಕಂಡಿದ್ದು, ಇದಕ್ಕೆ ನೂರಾರು ರೀಲ್ಸ್‌ಗಳು ಸೃಷ್ಟಿಯಾಗಿವೆ.
ಈ ಅನಿರೀಕ್ಷಿತ ಜನಪ್ರಿಯತೆಯು ನಿತ್ಯಶ್ರೀಗೆ ಹೊಸ ಸಾಧ್ಯತೆಗಳ ಬಾಗಿಲು ತೆರೆದಿದೆ. ಮೂಲಗಳ ಪ್ರಕಾರ, ಒಂದಿಬ್ಬರು ಸಿನಿಮಾ ನಿರ್ದೇಶಕರು ನಿತ್ಯಶ್ರೀಯನ್ನು ಸಂಪರ್ಕಿಸಿದ್ದು, ತಮ್ಮ ಮುಂಬರುವ ಚಿತ್ರಗಳಲ್ಲಿ ನಟಿಸುವಂತೆ ಆಹ್ವಾನಿಸಿದ್ದಾರೆ. ಇದು ಯುವತಿ ನಿತ್ಯಶ್ರೀಯ ಪಾಲಿಗೆ ಒಂದು ಹೊಸ ತಿರುವು ನೀಡುವ ಲಕ್ಷಣಗಳು ಗೋಚರಿಸುತ್ತಿವೆ.