ಪಂದ್ಯ ನಡೆಯುತ್ತಿದ್ದ ವೇಳೆಯೇ ತಂದೆ ನಿಧನ: ಡುನಿತ್ ವೆಲ್ಲಾಲಗೆ ಅಘಾತ

ಶ್ರೀಲಂಕಾದ ಆಲ್‌ರೌಂಡರ್ ಡುನಿತ್ ವೆಲ್ಲಾಲಗೆ ಏಷ್ಯಾಕಪ್​ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯ ನಡೆಯುತ್ತಿದ್ದ ವೇಳೆಯೇ ಅವರ ತಂದೆ ನಿಧನರಾಗಿದ್ದಾರೆ. ಶ್ರೀಲಂಕಾದ ಮಾಧ್ಯಮ ವರದಿಗಳ ಪ್ರಕಾರ, ಡುನಿತ್ ಅವರ ತಂದೆ ಸುರಂಗ ವೆಲ್ಲಾಲಗೆ ಹೃದಯಾಘಾತವಾಯಿತು.

ಅಫ್ಘಾನಿಸ್ತಾನ ವಿರುದ್ಧದ ಕೊನೆ ಲೀಗ್​ ಪಂದ್ಯದಲ್ಲಿ ಕಣಕ್ಕಿಳಿದ್ದ 22 ವರ್ಷದ ಯುವ ಸ್ಪಿನ್ನರ್, ತಮ್ಮ ಕೊನೆ ಓವರ್‌ನಲ್ಲಿ ಐದು ಸತತ ಸಿಕ್ಸರ್‌ ಚಚ್ಚಿಸಿಕೊಂಡಿದ್ದರು. ಇದರಿಂದ ನಿರಾಸೆಗೊಂಡಿದ್ದ ದುನಿತ್ ವೆಲ್ಲಾಲಗೆ ಪಂದ್ಯದ ನಂತರ ತಂದೆಯ ಹಠಾತ್​​ ಸಾವಿನ ಸುದ್ದಿಯ ಅಘಾತ ಕಾದಿತ್ತು.

ತಂಡದ ಮ್ಯಾನೇಜರ್​ ಹಾಗೂ ಕೋಚ್ ಸನತ್ ಜಯಸೂರ್ಯ ಅಘಾತಕಾರಿ ವಿಷಯವನ್ನು ದುನಿತ್ ವೆಲ್ಲಾಲಗೆ ತಿಳಿಸಿದ್ದಾರೆ. ದುಃಖಿತರಾದ ವೆಲ್ಲಲ್ಲಾಗೆ ಸಹ ಆಟಗಾರರು ಸಮಾಧಾನ ಪಡಿಸಿದ್ದಾರೆ. ವೆಲ್ಲಲ್ಲಾ ತಂದೆ ಹೃದಯಾಘಾತದಿಂದ ಮ್ಯಾಚ್ ನೋಡುತ್ತಲೇ ಮೃತಪಟ್ಟಿದ್ದಾರೆ. 

ಕಳೆದ ತಿಂಗಳು ಕೊಲಂಬೊದಲ್ಲಿ ವೃತ್ತಿಜೀವನದ ಅತ್ಯುತ್ತಮ 5/27 ಸೇರಿದಂತೆ ಭಾರತ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ, ವೆಲ್ಲಾಲ ಶ್ರೀಲಂಕಾ ತಂಡದಲ್ಲಿ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಆದರೆ ಗುರುವಾರದ ಪಂದ್ಯ ಇವರಿಗೆ ಶಾಶ್ವತವಾಗಿ ಕಹಿ ಅನುಭವ ನೀಡಿದೆ. ಸದ್ಯಕ್ಕೆ, ಈ ಕಷ್ಟದ ಸಮಯದಲ್ಲಿ ಡುನಿತ್ ವೆಲ್ಲಾಲಗೆ ಮತ್ತು ಅವರ ಕುಟುಂಬಕ್ಕೆ ಕ್ರಿಕೆಟ್ ಜಗತ್ತು ತನ್ನ ಸಂತಾಪವನ್ನು ವ್ಯಕ್ತಪಡಿಸಿದೆ.

Rakesh arundi

Leave a Reply

Your email address will not be published. Required fields are marked *