Kerala brain amoeba: ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕಿಗೆ 19 ಜನ ಬಲಿ, ಸೋಂಕು ಹರಡದಂತೆ ಮುನ್ನೆಚ್ಚರಿಕೆ ಏನು?
ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಅಂದರೆ ನೆಗ್ಲೆರಿಯಾ ಫೊವ್ಲೆರಿ ಅಮೀಬಾ ಸೋಂಕಿಗೆ 19 ಜನರು ಬಲಿ ಆಗಿದ್ದು, ಸಾವಿನ ಸಂಖ್ಯೆ ಏರಿಕೆ ಆಗುತ್ತಿದೆ. ನೆರೆಯ ರಾಜ್ಯದಲ್ಲಿ ಅಮೀಬಾ ಸೋಂಕು ಕಾಣಿಸಿಕೊಂಡ ಹಿನ್ನಲೆ ಸದ್ಯ ಕರ್ನಾಟಕದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಈ ಸೋಂಕು ಸಾಮಾನ್ಯವಾಗಿ ‘ಮೆದುಳು ತಿನ್ನುವ ಅಮೀಬಾ’ ಎಂದು ಕರೆಯಲ್ಪಡುವ ನೆಗ್ಲೆರಿಯಾ ಫೊವ್ಲೆರಿಯಿಂದ ಉಂಟಾಗುತ್ತದೆ. ಈ ವರ್ಷ, ಕೇರಳದಲ್ಲಿ 61 ಪ್ರಕರಣಗಳು ಮತ್ತು 19 ಸಾವುಗಳು ದಾಖಲಾಗಿವೆ. ಸಾಮಾನ್ಯವಾಗಿ ನಿಂತ ನೀರು, ಕೊಳಗಳು ಮತ್ತು ಸರೋವರಗಳಲ್ಲಿ ಈ ಅಮೀಬಾ ಬೆಳೆಯುತ್ತೆ.
ಅಮೀಬಾ ಅಂದರೆ ನೆಗ್ಲೆರಿಯಾ ಫೊವ್ಲೆರಿ ಅಮೀಬಾ ಎಂದು ಕರೆಯಲಾಗುವ ಈ ಸೋಂಕು ನೇರವಾಗಿ ಕೇಂದ್ರ ನರವ್ಯೂಹದ ಮೇಲೆಯೇ ಪರಿಣಾಮ ಬೀರುತ್ತದೆ. ಇದು ಮೆದುಳಿನ ಅಂಗಾಂಶವನ್ನು ನಾಶಪಡಿಸಿ, ತೀವ್ರವಾದ ಊತಕ್ಕೆ ಕಾರಣವಾಗುತ್ತದೆ. ಅಲ್ಲದೆ ಬಹುತೇಕ ಪ್ರಕರಣಗಳಲ್ಲಿ ಸಾವಿಗೂ ಕಾರಣವಾಗುತ್ತದೆ.
ಸೋಂಕು ಹರಡುವುದು ಹೇಗೆ?
ಈ ಅಮೀಬಾವು ಸಾಮಾನ್ಯವಾಗಿ ನಿಂತ ನೀರು, ಕೊಳಗಳು ಮತ್ತು ಸರೋವರಗಳಂತಹ ಬೆಚ್ಚಗಿನ ಶುದ್ಧ ನೀರಿನಲ್ಲಿ ಕಂಡುಬರುತ್ತದೆ. ಕಲುಷಿತ ನೀರಿನಲ್ಲಿ ಸ್ನಾನ ಮಾಡುವಾಗ ಅಥವಾ ಈಜುವಾಗ ಮೂಗಿನ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ನೀರಿನ ಉಷ್ಣತೆ ಹೆಚ್ಚಾಗುತ್ತಿದ್ದು, ಇದು ಈ ಅಮೀಬಾದ ಬೆಳವಣಿಗೆಗೆ ಪೂರಕವಾಗಿದೆ. ಇದರಿಂದ ಸೋಂಕಿನ ಅಪಾಯ ಇನ್ನಷ್ಟು ಹೆಚ್ಚಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ.
ಸೋಂಕಿನ ಲಕ್ಷಣಗಳೇನು?
ಈ ಸೋಂಕು ತಗುಲಿದ 1 ರಿಂದ 9 ದಿನಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು. ರೋಗಕ್ಕೆ ಗುರಿಯಾದವರಿಗೆ, ತಲೆನೋವು, ಜ್ವರ, ವಾಕರಿಕೆ ಬರುವುದು ಮತ್ತು ವಾಂತಿಯಾಗುತ್ತದೆ. ಈ ಅಮೀಬಾ ಮೂಗಿನ ಮೂಲಕ ಮೆದುಳಿಗೆ ವೇಗವಾಗಿ ಪ್ರವೇಶಿಸುತ್ತದೆ. ನಂತರ ಕೆಲವೇ ಗಂಟೆಗಳಲ್ಲಿ ಅಥವಾ 1 – 2 ದಿನಗಳಲ್ಲಿ ರೋಗವನ್ನು ತೀವ್ರಗೊಳಿಸುತ್ತದೆ.
ಸೋಂಕಿಗೆ ಚಿಕಿತ್ಸೆ ಹಾಗೂ ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು?
- ಕೊಳ, ಕೆರೆ ಮತ್ತು ನಿಂತಿರುವ ನೀರಿನಲ್ಲಿ ಸ್ನಾನ ಮಾಡಲು, ಈಜಲು ಹೋಗದೇ ಇರುವುದು.
- ಶುದ್ಧ ನೀರಿನಲ್ಲಿ ಈಜುವಾಗಲೂ ಮೂಗಿಗೆ ಕ್ಲಿಪ್‌ಗಳನ್ನು ಬಳಸುವುದು.
- ಬಾವಿ ಮತ್ತು ನೀರಿನ ಟ್ಯಾಂಕ್‌ಗಳನ್ನು ನಿಯಮಿತವಾಗಿ ಕ್ಲೋರಿನ್ ಬಳಸಿ ಸ್ವಚ್ಛಗೊಳಿಸುವುದು.
- ಒಂದು ವೇಳೆ ನಿಂತ ನೀರಿನ ಸಂಪರ್ಕಕ್ಕೆ ಬಂದ ನಂತರ ಜ್ವರ ಅಥವಾ ತಲೆನೋವಿನಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು.
ಇನ್ನು ಕರ್ನಾಟಕದಲ್ಲಿ ಯಾವುದೇ ರೀತಿ ನೆಗ್ಲೆರಿಯಾ ಫೊವ್ಲೆರಿ ಸೋಂಕು ಕಾಣಿಸಿಕೊಂಡಿಲ್ಲ. ಆದರು ಕೂಡ ಆರೋಗ್ಯ ಇಲಾಖೆಯಿಂದ ಕಟ್ಟೆಚ್ಚರ ವಹಿಸಲಾಗುತಿದೆ. ಭಯ ಪಡುವ ಅವಶ್ಯಕತೆ ಇಲ್ಲ ಎಂದು ಕೆ.ಸಿ ಜನರಲ್ ಆಸ್ಪತ್ರೆ ವೈದ್ಯ ಡಾ ಸುರೇಶ್ ಅವರು ಹೇಳಿದ್ದಾರೆ.